ವಯಸ್ಸಾದಂತೆ ಕೆಲವೊಮ್ಮೆ ಹೆಸರು ನೆನಪಿಗೆ ಬಾರದಿರುವುದು ಅಥವಾ ವಸ್ತುಗಳನ್ನು ಎಲ್ಲಿ ಇಟ್ಟಿದ್ದೇವೆ ಎನ್ನುವುದು ತಕ್ಷಣ ನೆನಪಾಗದಿರುವುದು ಸಹಜ. ಆದರೆ ದಿನನಿತ್ಯದ ಸರಳ ಕೆಲಸಗಳನ್ನು ಮಾಡಲು ಕಷ್ಟವಾಗುವುದು, ಒಂದೇ ಪ್ರಶ್ನೆಯನ್ನು ಪದೇಪದೇ ಕೇಳುವುದು, ಪರಿಚಿತ ಸ್ಥಳದಲ್ಲಿಯೇ ದಾರಿ ತಪ್ಪುವುದು, ಸಮಯ–ಸ್ಥಳಗಳ ಬಗ್ಗೆ ಗೊಂದಲವಾಗುವುದು ಅಥವಾ ಹಣಕಾಸು ವ್ಯವಹಾರ, ಅಡುಗೆ ಮುಂತಾದ ಪರಿಚಿತ ಕೆಲಸಗಳನ್ನು ನಿರ್ವಹಿಸಲು ಕಷ್ಟವಾಗುವುದು ಸಾಮಾನ್ಯ ವಯೋಸಹಜ ಮರೆವಿನ ಭಾಗವಲ್ಲ. ಇವು ಡಿಮೆನ್ಶಿಯಾ (Dementia) ಅಥವಾ ಬುದ್ಧಿಶಕ್ತಿ ಕ್ಷೀಣತೆಯ ಲಕ್ಷಣಗಳಾಗಿರಬಹುದು.
ಅಲ್ಝೈಮರ್ಸ್ ಕಾಯಿಲೆ ಡಿಮೆನ್ಶಿಯಾದ ಅತ್ಯಂತ ಸಾಮಾನ್ಯ ಕಾರಣ. ಪಾರ್ಶ್ವವಾಯು ಸಂಬಂಧಿತ ಮೆದುಳಿನ ಬದಲಾವಣೆಗಳು ಹಾಗೂ ಇತರ ನರರೋಗಗಳೂ ಡಿಮೆನ್ಶಿಯಾಗೆ ಕಾರಣವಾಗಬಹುದು. ಜೊತೆಗೆ, ಕೆಲವು ಚಿಕಿತ್ಸೆ ನೀಡಬಹುದಾದ ದೈಹಿಕ ಅಥವಾ ಔಷಧಿ ಸಂಬಂಧಿತ ಸಮಸ್ಯೆಗಳೂ ಮರೆವು ಮತ್ತು ಗೊಂದಲವನ್ನು ಉಂಟುಮಾಡಬಹುದು. ಆದ್ದರಿಂದ ಮರೆವು ಹೆಚ್ಚುತ್ತಿದೆ ಎಂದು ಕಂಡುಬಂದರೆ ಸರಿಯಾದ ವೈದ್ಯಕೀಯ ಮೌಲ್ಯಮಾಪನ ಅಗತ್ಯ.
ಡಿಮೆನ್ಶಿಯಾ ಆರೈಕೆ ಎಂದರೆ ಔಷಧಿ ಮಾತ್ರವಲ್ಲ. ಕೆಲವರಿಗೆ ಔಷಧಿಗಳು ಸಹಾಯಕವಾಗಬಹುದು. ಆದರೆ ತಾಳ್ಮೆ, ನಿಯಮಿತ ದಿನಚರಿ, ಸುರಕ್ಷಿತ ವಾತಾವರಣ, ಅರ್ಥಪೂರ್ಣ ಚಟುವಟಿಕೆಗಳು ಮತ್ತು ಕುಟುಂಬದ ಬೆಂಬಲವೂ ಉತ್ತಮ ಆರೈಕೆಯ ಪ್ರಮುಖ ಭಾಗಗಳು.
ನೆನಪು ಪರೀಕ್ಷಿಸುವುದಕ್ಕಿಂತ ಮನಸ್ಸನ್ನು ತೊಡಗಿಸೋಣ
ವೈದ್ಯಕೀಯ ಮೌಲ್ಯಮಾಪನಕ್ಕಾಗಿ ಮಾಡುವ ನೆನಪು ಪರೀಕ್ಷೆ ಬೇರೆ. ಆದರೆ ಮನೆಯ ದಿನನಿತ್ಯದ ಆರೈಕೆಯಲ್ಲಿ,
“ನನ್ನ ಹೆಸರು ನೆನಪಿದೆಯೇ?”
“ಇವತ್ತು ಯಾವ ದಿನ?”
“ನಿನ್ನೆ ಯಾರು ಬಂದಿದ್ದರು?”
ಎಂದು ಪದೇಪದೇ ಪರೀಕ್ಷಿಸುವಂತೆ ಪ್ರಶ್ನಿಸುವುದನ್ನು ತಪ್ಪಿಸುವುದು ಉತ್ತಮ.
ಉತ್ತರಿಸಲಾಗದಾಗ ಅವರಿಗೆ ಮುಜುಗರ, ಅಸಹಾಯಕತೆ ಅಥವಾ ಕೋಪ ಉಂಟಾಗಬಹುದು. ಅವರ ಮರೆವನ್ನು ಪರೀಕ್ಷಿಸುವುದಕ್ಕಿಂತ, ಅವರು ಇನ್ನೂ ಮಾಡಬಲ್ಲ ಕೆಲಸಗಳಿಗೆ ಅವಕಾಶ ನೀಡುವುದು ಮುಖ್ಯ.
ಹಳೆಯ ಫೋಟೋಗಳನ್ನು ನೋಡಬಹುದು. ಇಷ್ಟದ ಹಾಡುಗಳನ್ನು ಕೇಳಬಹುದು. ಹಣ್ಣು–ತರಕಾರಿಗಳನ್ನು ವಿಂಗಡಿಸುವುದು, ಹೂಗಳನ್ನು ಜೋಡಿಸುವುದು, ಸರಳ ಮನೆಕೆಲಸಗಳಲ್ಲಿ ಪಾಲ್ಗೊಳ್ಳುವುದು ಅಥವಾ ಹಳೆಯ ಊರು, ಉದ್ಯೋಗ ಮತ್ತು ಕುಟುಂಬದ ಘಟನೆಗಳ ಬಗ್ಗೆ ಮಾತನಾಡುವುದು ಉತ್ತಮ ಚಟುವಟಿಕೆಗಳಾಗಬಹುದು.
ಇವು ತೊಡಗಿಸಿಕೊಳ್ಳುವಿಕೆ, ಸಂತೋಷ, ಸಂವಹನ ಮತ್ತು ಕುಟುಂಬದೊಂದಿಗಿನ ಭಾವನಾತ್ಮಕ ಸಂಪರ್ಕಕ್ಕೆ ನೆರವಾಗಬಹುದು.
ದೇಹ ಚಲಿಸಿದರೆ ಮನಸ್ಸಿಗೂ ಮುದ
ಸಾಧ್ಯವಾದಷ್ಟು ಮತ್ತು ಸುರಕ್ಷಿತವಾಗಿ ದೈಹಿಕ ಚಟುವಟಿಕೆಯನ್ನು ಮುಂದುವರಿಸುವುದು ಒಳ್ಳೆಯದು.
ನಡೆಯುವುದು, ಕುರ್ಚಿಯಲ್ಲಿ ಕುಳಿತು ಮಾಡುವ ಸರಳ ಕೈ–ಕಾಲಿನ ವ್ಯಾಯಾಮ, ಗಿಡಗಳಿಗೆ ನೀರು ಹಾಕುವುದು ಅಥವಾ ಹಗುರವಾದ ತೋಟದ ಕೆಲಸ ಮಾಡುವುದು ಉಪಯುಕ್ತವಾಗಬಹುದು. ದೈಹಿಕ ಚಟುವಟಿಕೆ ಮನಸ್ಥಿತಿ, ನಿದ್ರೆ, ಚಲನೆಯ ಸಾಮರ್ಥ್ಯ ಮತ್ತು ದೇಹದ ಸಮತೋಲನಕ್ಕೆ ಸಹಾಯ ಮಾಡಬಹುದು.
ಆದರೆ ಪ್ರತಿಯೊಬ್ಬರ ಸಾಮರ್ಥ್ಯ ಒಂದೇ ಆಗಿರುವುದಿಲ್ಲ. ವಯಸ್ಸು, ಹೃದಯದ ಆರೋಗ್ಯ, ಕೀಲುಗಳ ತೊಂದರೆ ಮತ್ತು ಬೀಳುವ ಅಪಾಯವನ್ನು ಗಮನಿಸಿ ಚಟುವಟಿಕೆಯನ್ನು ಆಯ್ಕೆ ಮಾಡಬೇಕು. ಕಡಿಮೆ ಅವಧಿಯ ಹಗುರವಾದ ಚಟುವಟಿಕೆಯಿಂದ ಆರಂಭಿಸಿ, ವ್ಯಕ್ತಿಯ ಸಾಮರ್ಥ್ಯಕ್ಕೆ ತಕ್ಕಂತೆ ನಿಧಾನವಾಗಿ ಹೆಚ್ಚಿಸಬಹುದು.
ಸಂಗೀತ — ನೆನಪುಗಳಿಗೆ ಹಸಿರು ಸೇತುವೆ
ಇತ್ತೀಚಿನ ಘಟನೆಗಳನ್ನು ಮರೆತಿದ್ದರೂ ಪರಿಚಿತ ಸಂಗೀತ ಕೆಲವರಲ್ಲಿ ನೆನಪು, ಸಂತೋಷ ಮತ್ತು ಭಾವನೆಗಳನ್ನು ಎಬ್ಬಿಸಬಹುದು. ಇಷ್ಟದ ಹಳೆಯ ಕನ್ನಡ, ತುಳು, ಕೊಂಕಣಿ, ಹಿಂದಿ ಅಥವಾ ಇತರ ಭಾಷೆಯ ಹಾಡುಗಳನ್ನು ಕೇಳಿಸುವುದು ನೆಮ್ಮದಿಯ ಅನುಭವವಾಗಬಹುದು. ಕುಟುಂಬದವರು ಜೊತೆಗೂಡಿ ಹಾಡುವುದೂ ಸಂತೋಷಕರವಾಗಬಹುದು.
ಕೋಪ, ಆತಂಕ ಅಥವಾ ಅಶಾಂತಿ ಹೆಚ್ಚಾದಾಗ ಮೊದಲು ಅದರ ಹಿಂದೆ ನೋವು, ಅನಾರೋಗ್ಯ ಅಥವಾ ಇತರ ಕಾರಣವಿದೆಯೇ ಎಂದು ಗಮನಿಸಬೇಕು. ತುರ್ತು ಕಾರಣವಿಲ್ಲದಿದ್ದರೆ ಪರಿಸರವನ್ನು ಶಾಂತಗೊಳಿಸುವುದು, ಮೃದುವಾದ ಸಂಗೀತ ಕೇಳಿಸುವುದು, ಪರಿಚಿತ ಫೋಟೋಗಳನ್ನು ತೋರಿಸುವುದು, ಸ್ವಲ್ಪ ನಡೆಯುವುದು ಅಥವಾ ಆತ್ಮೀಯವಾಗಿ ಮಾತನಾಡುವುದು ಸಹಾಯ ಮಾಡಬಹುದು.
ದಿನಚರಿ ಬದಲಾಗದಿರಲಿ
ಡಿಮೆನ್ಶಿಯಾ ಇರುವವರಿಗೆ ಊಹಿಸಬಹುದಾದ, ನಿಯಮಿತ ಜೀವನಕ್ರಮ ನೆರವಾಗಬಹುದು.
ಬೆಳಿಗ್ಗೆ ಏಳುವುದು, ಸ್ನಾನ, ಊಟ, ಔಷಧಿ, ನಡಿಗೆ, ವಿಶ್ರಾಂತಿ ಮತ್ತು ರಾತ್ರಿ ಮಲಗುವ ಸಮಯವನ್ನು ಸಾಧ್ಯವಾದಷ್ಟು ಒಂದೇ ರೀತಿಯಲ್ಲಿ ಇಡುವುದು ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
ಅನಗತ್ಯವಾಗಿ ದಿನಚರಿಯನ್ನು ಪದೇಪದೇ ಬದಲಿಸುವುದು, ಮನೆ ಬದಲಿಸುವುದು ಅಥವಾ ಆರೈಕೆ ಮಾಡುವವರನ್ನು ನಿರಂತರವಾಗಿ ಬದಲಿಸುವುದು ಕೆಲವರಲ್ಲಿ ಆತಂಕ ಮತ್ತು ಗೊಂದಲವನ್ನು ಹೆಚ್ಚಿಸಬಹುದು.
ಮನೆಯನ್ನು ಸುರಕ್ಷಿತವಾಗಿರಿಸಿ
ಡಿಮೆನ್ಶಿಯಾ ಇರುವ ಹಿರಿಯರಲ್ಲಿ ಬೀಳುವಿಕೆ, ದಾರಿ ತಪ್ಪುವುದು ಮತ್ತು ಅಪಘಾತಗಳ ಅಪಾಯ ಹೆಚ್ಚಿರಬಹುದು.
ಮನೆಯಲ್ಲಿ ಸಾಕಷ್ಟು ಬೆಳಕು ಇರಲಿ. ಜಾರಿ ಹೋಗುವ ಚಾಪೆಗಳು, ನೆಲದ ಮೇಲೆ ಬಿದ್ದಿರುವ ವಿದ್ಯುತ್ ತಂತಿಗಳು ಮತ್ತು ಅನಗತ್ಯ ವಸ್ತುಗಳನ್ನು ತೆರವುಗೊಳಿಸಿ. ಸ್ನಾನಗೃಹದಲ್ಲಿ ಗೋಡೆ ಹಿಡಿಕೆಗಳನ್ನು (grab bars) ಅಳವಡಿಸುವುದು ಸಹಾಯಕ.
ಗಡಿಯಾರ ಮತ್ತು ದೊಡ್ಡ ಅಕ್ಷರದ ಕ್ಯಾಲೆಂಡರ್ ಕಾಣುವಂತೆ ಇರಿಸಬಹುದು. ಅಗತ್ಯವಿದ್ದರೆ ಶೌಚಾಲಯ, ಮಲಗುವ ಕೋಣೆ ಮುಂತಾದ ಬಾಗಿಲುಗಳಿಗೆ ಸರಳ ಗುರುತುಗಳನ್ನು ಹಾಕಬಹುದು.
ಔಷಧಿಗಳು, ಹಣಕಾಸು ದಾಖಲೆಗಳು, ಚಾಕು, ಬೆಂಕಿ ಮತ್ತು ಇತರ ಅಪಾಯಕಾರಿ ವಸ್ತುಗಳ ಬಳಕೆಗೆ ಸೂಕ್ತ ಮೇಲ್ವಿಚಾರಣೆ ಇರಬೇಕು.
ಒಂದೇ ಬಾರಿಗೆ ಒಂದೇ ಸೂಚನೆ
ಡಿಮೆನ್ಶಿಯಾ ಮುಂದುವರಿದಂತೆ ದೀರ್ಘ ಸೂಚನೆಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಬಹುದು.
“ಮೊದಲು ಸ್ನಾನ ಮಾಡಿ, ನಂತರ ಬಟ್ಟೆ ಬದಲಿಸಿ, ಊಟ ಮಾಡಿ, ಬಳಿಕ ಔಷಧಿ ತೆಗೆದುಕೊಳ್ಳಿ” ಎಂದು ಒಂದೇ ಬಾರಿಗೆ ಹೇಳುವುದಕ್ಕಿಂತ,
“ಬನ್ನಿ, ಸ್ನಾನ ಮಾಡೋಣ.”
ಎಂದು ಒಂದು ಸರಳ ಸೂಚನೆ ನೀಡುವುದು ಉತ್ತಮ.
ಅವರು ಕೆಲಸ ಮಾಡಲು ಹೆಚ್ಚು ಸಮಯ ತೆಗೆದುಕೊಂಡರೂ ಆತುರಪಡಿಸಬೇಡಿ. ಸಾಧ್ಯವಾದಷ್ಟು ಸ್ವತಃ ಮಾಡಲು ಅವಕಾಶ ನೀಡಿ. ಅವರಿಂದ ಎಲ್ಲವನ್ನೂ ಕಿತ್ತುಕೊಳ್ಳುವುದೂ ಆರೈಕೆ ಅಲ್ಲ.
ಕೋಪ ಬಂದಾಗ ವಾದ ಬೇಡ
ಡಿಮೆನ್ಶಿಯಾ ಇರುವವರು ಕೆಲವೊಮ್ಮೆ ಒಂದೇ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಬಹುದು. “ನನ್ನ ಮನೆಗೆ ಹೋಗಬೇಕು” ಎಂದು ಹಠ ಮಾಡಬಹುದು. ಮನೆಯವರ ಬಗ್ಗೆ ಅನುಮಾನಪಡಬಹುದು. ಸಂಜೆ ಅಥವಾ ರಾತ್ರಿ ಗೊಂದಲ ಹೆಚ್ಚಾಗಬಹುದು. ಇವು ರೋಗದ ಭಾಗವಾಗಿರಬಹುದು; ಕುಟುಂಬದವರನ್ನು ಉದ್ದೇಶಪೂರ್ವಕವಾಗಿ ಕಾಡುವ ವರ್ತನೆ ಎಂದು ಭಾವಿಸಬಾರದು.
“ಇದು ನಿಮ್ಮ ಮನೆಯೇ!”
“ಎಷ್ಟು ಬಾರಿ ಹೇಳಬೇಕು?”
“ನೀವು ತಪ್ಪಾಗಿ ಮಾತನಾಡುತ್ತಿದ್ದೀರಿ.”
ಎಂದು ವಾದಿಸುವುದರಿಂದ ಪರಿಸ್ಥಿತಿ ಮತ್ತಷ್ಟು ಕಠಿಣವಾಗಬಹುದು.
ಬದಲಾಗಿ ಅವರ ಭಾವನೆಯನ್ನು ಗಮನಿಸಿ.
“ನಿಮಗೆ ಮನೆ ನೆನಪಾಗುತ್ತಿದೆ ಅಲ್ಲವೇ? ನಾನು ನಿಮ್ಮ ಜೊತೆ ಇದ್ದೇನೆ.”
ಎಂದು ಶಾಂತವಾಗಿ ಹೇಳಬಹುದು.
ಅವರು ತಪ್ಪು ಎಂದು ಸಾಬೀತುಪಡಿಸುವುದಕ್ಕಿಂತ, ಅವರ ಭದ್ರತೆಯ ಭಾವನೆಯನ್ನು ಉಳಿಸುವುದು ಮುಖ್ಯ. ತಾಳ್ಮೆ, ಧೈರ್ಯ ತುಂಬುವ ಮಾತುಗಳು ಮತ್ತು ವಾದವನ್ನು ತಪ್ಪಿಸುವುದು ವರ್ತನಾ ಸಮಸ್ಯೆಗಳನ್ನು ನಿಭಾಯಿಸಲು ಸಹಾಯಕ.
ವರ್ತನೆ ಏಕಾಏಕಿ ಬದಲಾಗಿದೆಯೇ? ಕಾರಣ ಹುಡುಕಿ
ಸಾಮಾನ್ಯವಾಗಿ ಶಾಂತವಾಗಿದ್ದ ವ್ಯಕ್ತಿ ಹಠಾತ್ತನೆ ಕೋಪಗೊಳ್ಳಲು ಆರಂಭಿಸಿದರೆ ಅಥವಾ ಗೊಂದಲ ಏಕಾಏಕಿ ಹೆಚ್ಚಾದರೆ ಅದನ್ನು ಕೇವಲ “ಡಿಮೆನ್ಶಿಯಾ ಹೆಚ್ಚಾಗಿದೆ” ಎಂದು ಭಾವಿಸಬಾರದು.
ನೋವು ಇದೆಯೇ?
ಜ್ವರ ಅಥವಾ ಸೋಂಕಿನ ಲಕ್ಷಣಗಳಿವೆಯೇ?
ಮಲಬದ್ಧತೆ ಇದೆಯೇ?
ಹಸಿವು ಅಥವಾ ದಾಹ ಇದೆಯೇ?
ಔಷಧಿಯಲ್ಲಿ ಇತ್ತೀಚೆಗೆ ಬದಲಾವಣೆಯಾಯಿತೇ?
ನಿದ್ರೆ ಕಡಿಮೆಯಾಗಿದೆಯೇ?
ಎಂಬುದನ್ನು ಗಮನಿಸಬೇಕು.
ನೋವು, ನಿದ್ರಾಹೀನತೆ, ಮಲಬದ್ಧತೆ, ಹಸಿವು, ದಾಹ ಮತ್ತು ಹೊಸ ಔಷಧಿಗಳ ಅಡ್ಡಪರಿಣಾಮಗಳು ವರ್ತನಾ ಬದಲಾವಣೆಗೆ ಕಾರಣವಾಗಬಹುದು.
ವಿಶೇಷವಾಗಿ ಹಿರಿಯ ವ್ಯಕ್ತಿಯಲ್ಲಿ ಹಠಾತ್ತನೆ ಉಂಟಾಗುವ ಗೊಂದಲವು ಡೆಲಿರಿಯಂ (Delirium) ಎಂಬ ತುರ್ತು ವೈದ್ಯಕೀಯ ಸ್ಥಿತಿಯ ಸೂಚನೆಯಾಗಿರಬಹುದು. ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು.
ಆರೈಕೆದಾರರೂ ಮನುಷ್ಯರೇ
ಡಿಮೆನ್ಶಿಯಾ ಆರೈಕೆ ಕೆಲವೇ ದಿನಗಳ ಜವಾಬ್ದಾರಿಯಲ್ಲ. ಅದು ಹಲವು ವರ್ಷಗಳವರೆಗೆ ಮುಂದುವರಿಯಬಹುದಾದ ಪಯಣ.
ಒಬ್ಬರೇ ಇಡೀ ಜವಾಬ್ದಾರಿಯನ್ನು ಹೊತ್ತರೆ ದೈಹಿಕ ಮತ್ತು ಮಾನಸಿಕ ದಣಿವು ಹೆಚ್ಚಬಹುದು. ಔಷಧಿ ನೀಡುವುದು, ವೈದ್ಯರ ಬಳಿ ಕರೆದುಕೊಂಡು ಹೋಗುವುದು, ಆಹಾರ ನೋಡಿಕೊಳ್ಳುವುದು, ರಾತ್ರಿಯ ಮೇಲ್ವಿಚಾರಣೆ ಮತ್ತು ಹಣಕಾಸಿನ ವ್ಯವಹಾರಗಳನ್ನು ಸಾಧ್ಯವಾದಷ್ಟು ಕುಟುಂಬದವರು ಹಂಚಿಕೊಳ್ಳಬೇಕು.
ಆರೈಕೆದಾರರು ತಮ್ಮ ನಿದ್ರೆ, ಆಹಾರ, ವ್ಯಾಯಾಮ, ಸಾಮಾಜಿಕ ಸಂಪರ್ಕ ಮತ್ತು ದೈಹಿಕ–ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಅಗತ್ಯವಿದ್ದಾಗ ಕುಟುಂಬದ ಇತರ ಸದಸ್ಯರು ಮತ್ತು ವೃತ್ತಿಪರರ ನೆರವು ಪಡೆಯಬೇಕು.
ಆರೈಕೆದಾರರ ದಣಿವು ಸ್ವಾರ್ಥವಲ್ಲ; ಅದು ದೀರ್ಘಕಾಲದ ಆರೈಕೆಯ ಪರಿಣಾಮವಾಗಿರಬಹುದು.
ಯಾವಾಗ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು?
ಡಿಮೆನ್ಶಿಯಾ ಇರುವ ವ್ಯಕ್ತಿಯಲ್ಲಿ ಕೆಳಗಿನ ಬದಲಾವಣೆಗಳು ಕಂಡುಬಂದರೆ ವಿಳಂಬ ಮಾಡಬೇಡಿ:
- ಹಠಾತ್ತನೆ ಗೊಂದಲ ಬಹಳ ಹೆಚ್ಚಾಗುವುದು
- ಜ್ವರದೊಂದಿಗೆ ತೀವ್ರ ದೈಹಿಕ ಅಸ್ವಸ್ಥತೆ
- ಬಿದ್ದು ತಲೆಗೆ ಗಾಯವಾಗುವುದು
- ಆಹಾರ ಅಥವಾ ನೀರನ್ನು ತೆಗೆದುಕೊಳ್ಳದೇ ಇರುವುದು
- ಹೊಸದಾಗಿ ತೀವ್ರ ಭ್ರಮೆ ಅಥವಾ ಅತಿಯಾದ ಅಶಾಂತಿ ಕಾಣಿಸಿಕೊಳ್ಳುವುದು
- ಮೂತ್ರ ವಿಸರ್ಜನೆಯಲ್ಲಿ ತೀವ್ರ ತೊಂದರೆ
- ಮಾತು ತೊದಲುವುದು ಅಥವಾ ಮುಖ ವಕ್ರವಾಗುವುದು
- ಕೈ ಅಥವಾ ಕಾಲಿನಲ್ಲಿ ಹೊಸ ದುರ್ಬಲತೆ ಕಾಣಿಸಿಕೊಳ್ಳುವುದು
- ತನಗೆ ಅಥವಾ ಇತರರಿಗೆ ಅಪಾಯ ಉಂಟುಮಾಡುವ ರೀತಿಯಲ್ಲಿ ವರ್ತಿಸುವುದು
ವಿಶೇಷವಾಗಿ ಹಠಾತ್ ಗೊಂದಲ, ಮುಖ ವಕ್ರವಾಗುವುದು, ಮಾತಿನ ಬದಲಾವಣೆ ಅಥವಾ ಅಂಗದ ಹೊಸ ದುರ್ಬಲತೆಯನ್ನು ತುರ್ತು ಸ್ಥಿತಿಯಾಗಿ ಪರಿಗಣಿಸಬೇಕು.
ನೆನಪು ಕಡಿಮೆಯಾದರೂ ಆತ್ಮೀಯತೆಯ ಅಗತ್ಯ ಉಳಿಯುತ್ತದೆ
ಡಿಮೆನ್ಶಿಯಾ ವ್ಯಕ್ತಿಯ ನೆನಪು, ಯೋಚನೆ ಮತ್ತು ನಿರ್ಧಾರ ಮಾಡುವ ಸಾಮರ್ಥ್ಯವನ್ನು ನಿಧಾನವಾಗಿ ಕುಗ್ಗಿಸಬಹುದು. ಒಂದು ಹಂತದಲ್ಲಿ ಅವರು ನಮ್ಮ ಹೆಸರನ್ನೂ ಮರೆತುಬಿಡಬಹುದು.
ಆದರೆ ಅದರಿಂದ ಪ್ರೀತಿ, ಭದ್ರತೆ ಮತ್ತು ಗೌರವದ ಅಗತ್ಯ ಇಲ್ಲವಾಗುವುದಿಲ್ಲ. ಹೆಸರು ಅಥವಾ ಮುಖ ಗುರುತಿಸುವಿಕೆ ಕಡಿಮೆಯಾದರೂ ಪರಿಚಿತ ಧ್ವನಿ, ಸ್ಪರ್ಶ ಮತ್ತು ಸಾನ್ನಿಧ್ಯ ಕೆಲವರಿಗೆ ನೆಮ್ಮದಿ ನೀಡಬಹುದು.
ಆದ್ದರಿಂದ ಡಿಮೆನ್ಶಿಯಾ ಆರೈಕೆಯ ಮೂಲಮಂತ್ರ ಸರಳ:
ಮರೆವನ್ನು ಪ್ರಶ್ನಿಸಬೇಡಿ — ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಿ.
ತಪ್ಪನ್ನು ಸಾಬೀತುಪಡಿಸಬೇಡಿ — ಭದ್ರತೆಯನ್ನು ನೀಡಿ.
ಎಲ್ಲವನ್ನೂ ಅವರ ಬದಲು ಮಾಡಬೇಡಿ — ಸಾಧ್ಯವಾದಷ್ಟು ಸ್ವಾವಲಂಬನೆ ಉಳಿಸಿ.
ಕೋಪಕ್ಕೆ ಕೋಪದಿಂದ ಉತ್ತರಿಸಬೇಡಿ — ತಾಳ್ಮೆಯಿಂದ ಪ್ರತಿಕ್ರಿಯಿಸಿ.
ನೆನಪುಗಳು ನಿಧಾನವಾಗಿ ಮಸುಕಾಗಬಹುದು. ಆದರೆ ಕುಟುಂಬದ ಆತ್ಮೀಯತೆ, ಗೌರವ ಮತ್ತು ಪ್ರೀತಿಯ ಸ್ಪರ್ಶ ಮಾಸದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲಿದೆ.
ಪ್ರೀತಿ, ತಾಳ್ಮೆ, ಸುರಕ್ಷತೆ ಮತ್ತು ಗೌರವ — ಇವೇ ಉತ್ತಮ ಡಿಮೆನ್ಶಿಯಾ ಆರೈಕೆಯ ನಾಲ್ಕು ಬಲವಾದ ಆಧಾರಸ್ತಂಭಗಳು.
– Dr. P. V. Bhandary





